ಚಾಮರ್ಸ್, ಜಾರ್ಜ್
1742-1825. ಸ್ಕಾಟ್‍ಲೆಂಡಿನ ಪ್ರಾಚೀನಾನ್ವೇಷಕ ಇತಿಹಾಸಕಾರ, ರಾಜಕೀಯ ಬರೆಹಗಾರ. ಜನಿಸಿದ್ದು ಸ್ಕಾಟ್‍ಲೆಂಡಿನ ಮರಿ ಕೌಂಟಿಯ ಫೊಕಾಬರ್ಸ್‍ನಲ್ಲಿ. ಆಬರ್‍ಡೀನ್ ಮತ್ತು ಎಡಿನ್‍ಬರೊಗಳಲ್ಲಿ ವಿದ್ಯಾಭ್ಯಾಸ ಮುಗಿಸಿ 1763ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನದ ಮೇರಿ ಲ್ಯಾಂಡಿಗೆ ವಲಸೆಹೋಗಿ ವಕೀಲಿವೃತ್ತಿಯಲ್ಲಿ ನಿರತನಾದ. ಅಮೆರಿಕದಲ್ಲಿ ಆಂತರಿಕ ಯುದ್ಧಪ್ರಾರಂಭವಾದಾಗ ಇಂಗ್ಲೆಂಡಿಗೆ ಹಿಂತಿರುಗಿದ. ಅನಂತರ ಪೊಲಿಟಿಕಲ್ ಆನಲ್ಸ್ ಆಫ್ ದಿ ಪ್ರೆಸೆಂಟ್ ಯುನೈಟೆಡ್ ಕಾಲೊನೀಸ್ ಎಂಬ ಗ್ರಂಥವನ್ನು ಪ್ರಕಟಿಸಿದ (1780). ಈತ ಪ್ರಸಿದ್ಧನಾದ್ದು ಕ್ಯಾಲೆಡೋನಿಯ: ಆರ್ ಎನ್ ಅಕೌಂಟ್, ಹಿಸ್ಟಾರಿಕಲ್ ಅಂಡ್ ಟೋಪೊಗ್ರಾಫಿಕಲ್ ಆಫ್ ನಾರ್ತ್ ಬ್ರಿಟನ್ ಎಂಬ ಗ್ರಂಥದಿಂದ. ಇದು ಬ್ರಟನ್ನಿನ ಪ್ರಾಚೀನ ವಸ್ತು. ವಿಷಯಗಳಿಗೆ ಮೀಸಲಾದ ಹೆಬ್ಬೊತ್ತಗೆ. 1807 ರಿಂದ 24ರ ಅವಧಿಯಲ್ಲಿ ಈ ಗ್ರಂಥದ ಮೂರು ಸಂಪುಟಗಳನ್ನು ಹೊರತಂದ. ಆದರೆ ತನ್ನ ಜೀವಿತಕಾಲದಲ್ಲಿ ಈ ಸರಣಿಯನ್ನು ಮುಗಿಸಲಾಗಲಿಲ್ಲ. ಅನೇಕ ರಾಜಕೀಯ ಗ್ರಂಥಗಳ ಜೊತೆಗೆ ಕೆಲವು ಜೀವನ ಚರಿತ್ರೆಗಳನ್ನೂ ಈತ ರಚಿಸಿದ್ದಾನೆ, ಡಫೋ (1785), ಅಲನ್ ರ್ಯಾಮ್‍ಸೇ (1800), ಸರ್ ಡೇವಿಡ್ ಲಿಂಡ್‍ಸೇ (1806), ಮತ್ತು ಮೇರಿ, ಕ್ವೀನ್ ಆಫ್ ಸ್ಕಾಟ್ಸ್ (1818)-ಇವು ಈತನ ಪ್ರಸಿದ್ಧ ಜೀವನಚರಿತ್ರೆಗಳು. 1786ರಿಂದ ಸಾಯುವ ತನಕ ಚಾಮರ್ಸ್ ಪ್ರಿವಿ ಕೌನ್ಸಿಲಿನ ವಾಣಿಜ್ಯೋದ್ಯಮ ಸಮಿತಿಯ ಮುಖ್ಯ ಕರಣಿಕನಾಗಿ ಕೆಲಸಮಾಡುತ್ತಿದ್ದ.            (ಎ.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ